← ಇತರೆ

ದಾಸರೆ ಪುರಂದರದಾಸರು

📂 ಇತರೆ
✍️ ವಿಜಯದಾಸ
🏷️ ಕೀರ್ತನೆಗಳು
ದಾಸರೆ ಪುರಂದರದಾಸರು
ಲೇಸಾಗಿ ಎನಗೆ ಸುಮಾರ್ಗವನು ತೋರಿದರು

ಅತಿ ಮುಗ್ಧನಾಗಿ ದುರುಳರಾ ದುರಾಚಾರದಲ್ಲಿ
ಮತಿಗೆಟ್ಟು ಮಹಿಯೊಳಗೆ ತಿರುಗುತಿರಲೂ
ಅತಿ ದಯಾಪರರಾಗಿ ತನ್ನವನಿವನೆಂದು
ಹಿತದಲ್ಲಿ ಪೊರೆದು ಕುಮತಿಯ ಬಿಡಿಸಿದರು||1||

ಶಬ್ದಾದಿ ಮೊದಲಾದ ವಿಷಯಂಗಳಾ ಕರ್ಮ
ದಬ್ಧ್ದಿಯೊಳಗೆ ಬಿದ್ದು ಪೊರುಳುತಿದ್ದಾ
ಲುಬ್ಧಕನ ಕರೆದು ದೃಢವಾಗಿ ಸುಜ್ಞಾನದ
ಅಬ್ಧಿಯೊಳಗಿಟ್ಟು ಕರುಣದಲಿ ನೋಡಿದರು ||2||
ಹಿಂದೆ ಏಸೇಸು ಜನ್ಮ ಜನಿಸಿ ಅನ್ಯ
ರಿಂದಲಿ ಬಲು ಕಾಲ ನೊಂದ ನರನಾ
ತಂದು ವೈರಾಗ್ಯದೊಳು ಪೊಗಸಿ ಸೌಖ್ಯವ ಪರಶಿ
ತಂದೆ ಮಕ್ಕಳನು ಸಾಕಿದಂತೆ ಸಾಕಿದರು||3||

ಉಪದೇಶವಿತ್ತರು ಸುಪ್ರೀತಾರ್ಥದಲಿ ಬಂದು
ಜಪ ನಿಜಾಸನ ಧ್ಯಾನ ಜ್ಞಾನದಿಂದ
ಸಪುತೆರಡು ಲೋಕದ ಒಡೆಯನ್ನ ಪಾದವ
ಸಫಲವಾಗುವಂತೆ ಸಾಧನವ ಪೇಳಿದರು ||4||

ದಾರಿದ್ರ ದೋಷವ ಸೇರಿದ ಮಾನವನಿಗೆ
ಆರು ಕೊಡದಲೆ ಧೇನು ದೊರಕಿದಂತೆ
ಕಾರುಣ್ಯದಲಿ ಗುರು ಪುರಂದರದಾಸರು
ಮೂರುತಿ ವಿಜಯವಿಠ್ಠಲನ್ನ ತೋರಿಸಿದರು ||5||
← ಇತರೆ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.