← ಶ್ರೀಕೃಷ್ಣ

ನರಕ ಎತ್ತಣದೋ ನರಕ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ನರಕ ಎತ್ತಣದೋ ನರಕ ಎತ್ತಣದೋ
ನರ ಕಂಠೀರವನೆಂದು ಸ್ಮರಿಸುವ ಜನರಿಗೆ

ಸ್ನಾನ ಮಾಡುವುದೇಕೆ ಧ್ಯಾನಗೈಯುವುದೇಕೆ
ದಾನ ಧರ್ಮಂಗಳು ಮಾಡಲೇಕೆ
ಶ್ರೀ ನಾರಾಯಣನೆಂದು ಆವಾಗಲೂ ಜಿಹ್ವೆ
ತ್ರಾಣದಲಿ ಬಿಡದೆ ಎಣಿಸುವ ಜನರಿಗೆ||1||

ತೀರ್ಥ ಮೀಯುವದೇಕೆ ಯಾತ್ರೆ ಚರಿಪದೇಕೆ
ಸ್ತೋತ್ರ ಮಂತ್ರಾದಿಗಳು ಪಠಿಸಲೇಕೆ
ಚಿತ್ರಮಹಿಮ ನೀಲಗಾತ್ರನ್ನ ಚರಿತೆ ಕಾ
ಲತ್ರಯ ಬಿಡದೆ ಉಚ್ಚರಿಸುವ ಜನರಿಗೆ ||2||

ದೀಪ ಧೂಪಗಳೇಕೆ ನಾನಾ ಪರಿಯಲ್ಲಿ
ಸೋಪಸ್ಕರದ ಎಡೆ ಇಡಲೇತಕೆ
ಅಪಾರ ಮಹಿಮ ಅನಾಥರೊಡೆಯ ರಂಗ
ಶ್ರೀಪತಿ ಎಂದೀಗ ಸ್ಮರಿಸುವ ಜನರಿಗೆ ||3||

ಭೂತದಯಗಳೇಕೆ ನೀತಿ ಎಂಬುದು ಏಕೆ
ಜಾತವೇದಸನಲ್ಲಿ ಕಳವಳವೇಕೆ
ಪೀತಾಂಬರಧರ ಪಿನಾಕಿ ಸಖನೆಂದು
ಮಾತು ಮಾತಿಗೆ ನೆನೆದು ಸುಖಿಸುವ ಜನರಿಗೆ ||4||

ಏನೇನು ಕರ್ಮದಾಚರಣೆ ಮಾಡುವದೇಕೆ
ಭಾನು ಉದಯವಿಡಿದು ತೊಳಲಲೇಕೆ
ದೀನನಾಗಿ ದಾತಾ ವಿಜಯವಿಠ್ಠಲ ಹರಿಯ
ಮಾನಸದಲಿ ಧ್ಯಾನ ಮಾಡುವ ಜನರಿಗೆ ||5||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.