← ಶ್ರೀರಾಮಕೃಷ್ಣ

ನೋಡಿರಣ್ಣ ನೀವೆಲ್ಲ ಬಂದು

📂 ಶ್ರೀರಾಮಕೃಷ್ಣ
✍️ ಹೆಚ್ ಎನ್ ಮುರಳೀಧರ
🏷️ ಕೀರ್ತನೆಗಳು
🎵 ರಾಗ: ಮಿಶ್ರ ಪಹಾಡೀ
🥁 ತಾಳ: ಕವಾಲೀ
🎧
ಶ್ರವಣ ಮಾಡಿ
ವಿದ್ವಾನ್ ಶ್ರೀ ಗುರುರಾಜ್
ನೋಡಿರಣ್ಣ ನೀವೆಲ್ಲ ಬಂದು ಈ ನೂತನ ಮಾನವನ |
ತ್ಯಾಗ - ವಿವೇಕದ ಚೀಲಗಳೆರಡನು ಹೆಗಲಲಿ ಹೊತ್ತಿಹನ ||

ಗಂಗೆಯ ದಡದಲಿ ಹೊರಳುತ 'ತಾಯಿ' ಎನ್ನುತ ಕೂಗುವನು |
'ಕಾಣದೆ ನಿನ್ನನು ದಿನಗಳುರುಳುತಿವೆ' ಎನ್ನುತ ಮರುಗುವನು ||

ನಂಬದ ನೆಚ್ಚದ ಮಂದಮತಿಗಳಿಗೆ ಸರಳಕಥೆಯ ಹೇಳಿ |
ಕಾಳಿಯು ಕೃಷ್ಣನು ಒಂದೇ ಎನ್ನುತ ಸಾರುತಿಹನು ಕೇಳಿ ||

ಅಕ್ವಾ-ವಾಟರ್-ಪಾನಿ-ವಾರಿಗಳು ನೀರಿಗೊಂದೆ ಹೆಸರು |
ಅಲ್ಲಾ-ಜೀಸಸ್-ಮೋಸೆಸ್-ಕಾಳಿಯರು ಪರಬ್ರಹ್ಮನುಸಿರು ||

ಪಂಡಿತ - ಪಾಮರ - ಬಡವನು - ಬಲ್ಲಿದ ಭೇದ ತೋರಲಿಲ್ಲ|
ಜಾತಿಮತಗಳಾ ರೀತಿನೀತಿಗಳ ಮನಕೆ ತಾರಲಿಲ್ಲ ||

ದಿವ್ಯೋನ್ಮಾದದಿ ಬಾಹುಗಳೆರಡನು ಬೀಸಿ ಕರೆಯುತಿಹನು |
ತಾಮಸಗೈಯದೆ ಎಲ್ಲರು ಬೇಗನೆ ಬನ್ನಿರೆನ್ನುತಿಹನು ||

ಜಗದ ಜನಗಳಿಗೆ ಕೃಪೆಯನು ತೋರಲು ಕಾತರಗೊಂಡಿಹನು |
ಭವಸಾಗರವನು ದಾಟಿಸೆ ನೌಕೆಯ ತಂದು ಕಾಯುತಿಹನು ||
← ಶ್ರೀರಾಮಕೃಷ್ಣ ಹೆಚ್ ಎನ್ ಮುರಳೀಧರ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.