← ಶ್ರೀಕೃಷ್ಣ

ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ
ಪಂಕಜಾಲಯ ಸುಪ್ರೀಯ
ಪಂಕಜಭವ ಅಹಿ ಕಂಕಣನುತ ಪದ-
ಪಂಕಜ ತೋರೊ ಮೀನಾಂಕನ ಜನಕ

ಪತಿತ ಪಾವನ ಮೋಹನ, ಪಾಲಿಸೊ ಎನ್ನ
ಸತತ ಬಿಡದೆ ನೋಡೆನ್ನ
ಹಿತರಹಿತರಾದವರನ್ನ ಪೊರೆದಳಿದೆ ಘನ್ನ
ನತಜನರಿಗೆ ಪ್ರಸನ್ನ
ಕ್ರತುಭುಜ ದಿತಿಸುತ ತತಿಸಂಗತಿಯಲಿ
ಮಥಿಸಲು ವನಧಿಯ ಅತಿ ಸಮ್ಮತಿಯಲಿ
ಚತುರ ಧರಿಸಿ ಪರ್ವತ ಸುರತತಿಗ-
ಮೃತ ವುಣಿಸಿದ ಶಾಶ್ವತಗತಿನಾಥ ||1||

ಸತಿಯ ಕಾಯಿದ ವಿನೋದ ಸಾಮಜವರದ
ಚತುರದಶ ಲೋಕಾಧಿನಾಥ
ಗತಿ ನೀನೆ ಮಹಾಪ್ರಸಾದ ಪರಮಮೋದ
ಅತಿಶಯದಿ ಪೊಳೆವ ಪಾದ
ಶತಪತ್ರವು ಹೃದ್ಗತವಾಗಲಿ ಉ-
ನ್ನತ ಮಹಿಮನೆ ಕೀರುತಿವಂತನೆ ಅ-
ಪ್ರತಿಭಾರತಮಲ್ಲ ಮೂರವತಾರಗೆ
ಅತಿಪ್ರಿಯನೆನಿಪ ಮೂರತಿ ಚತುರದೇವ ||2||

ಸ್ಥಿತ ಮನ ಮಾಡೋ ಭವಭಂಗ ಸಂಗ ನಿಸ್ಸಂಗ
ಚ್ಯುತಿ ದೂರ ಶೌರೀ ಕಾಳಿಂಗ-
ಮಥನ- ದುರಿತ ಮಾತಂಗ-ಮರಿಗೆ ಸಿಂಗ
ತುತಿಪೆ ಕರುಣಾಂತರಂಗ
ಕ್ಷಿತಿಯೊಳಗಹಿ ಪರ್ವತನಿವಾಸನೆ
ಖರೆಗೊಳಿಸುವ ದುರ್ಮತಿಯನು ತೊಲಗಿಸಿ
ತ್ವತು ಪಾದದಲಿಡು ಮತಿಯಲ್ಲದೆ ತಿರು -
ಪತಿ ವಿಜಯವಿಠ್ಠಲ ಇತರವನರಿಯೆ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.