← ಶ್ರೀಕೃಷ್ಣ

ಸಲಹೊ ಸಾತ್ತ್ವಿಕ ದೈವವೆ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಸಲಹೊ ಸಾತ್ತ್ವಿಕ ದೈವವೆ ಕಾಗಿನೆಲೆಯಾದಿ ಕೇಶವ
ನೀಲದ ವರ್ಣ ಆದಿಕೇಶವಾ

ಕನಕ ಕಾಮಿನಿ ಕುಂಭಿಣಿಯಿಂದ ಬರುವ ಚಿಂತೆ |
ಕನಸಿನೊಳಗಾದರೂ ದೂರಾಗಲಿ |
ಕನಕೋದರಗೆ ಸಾಮ್ಯವಾದ ಜೀವನದಲ್ಲಿ |
ಕನಲದೆ ಭಕುತಿ ಇರಲಿ ಎಂದೆಂದಿಗೆ |
ಮನವು ನಿನ್ನಾಧೀನ ದೇವರದೇವ ||1||

ಕನಕ ನಯನ ಮಯನ ಕಂಡವರಿಗೆ ಜ್ಞಾನ |
ಕನಕವರುಷವ ಕರೆವ ವಾಸುದೇವಾ |
ಕನಕಕೇಶಪ್ರಿಯ ಕಾಮಿತಫಲದಾಯಕ |
ಕನಕ ಪರ್ವತದಿಂದ ಬಂದ ಗೋವಿಂದ ವ |
ಚನವೇ ನಿನ್ನಾಧೀನವೋ ದೇವರ ದೇವ ||2||

ಕನಕ ಮಾಲಿಗೆ ಒಲಿದ ಕಮಲದ ಲೋಚನ |
ಕನಕಾಂಬರಧರಾನಂದ ಮೂರ್ತಿ |
ಕನಕಕಾಯ ನಮ್ಮ ವಿಜಯವಿಠ್ಠಲರೇಯ |
ಕನಕರಿಸುವಾಗ ನಿನ್ನ ಧ್ಯಾನವೆ ಕೊಡು |
ತನುವೆ ನಿನ್ನಾಧೀನವೊ ದೇವರದೇವ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.