← ಶ್ರೀಕೃಷ್ಣ

ಸೌಂದರ್ಯ ಪುರುಷನ ಕಣ್ದೆರದು ನೋಡಿದೆನು

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಸೌಂದರ್ಯ ಪುರುಷನ ಕಣ್ದೆರದು ನೋಡಿದೆನು |
ಇಂದೆನ್ನ ಜನುಮ ಸಫಲ |
ಹಿಂದೆ ಅನಂತೇಶನೆಂದೆಂಬ ನಾಮದಲಿ |
ಚಂದದಲಿ ಮೆರೆವ ಕಂಬು | ಕಂದರದ | ತಿಮ್ಮನ

ಮುಕುಟ ಮುತ್ತಿನ ಹಾರ | ಮಕರ ಕುಂಡಲಧಾರ |
ಮಕ್ಕಳಾ ಮಣಿಸು ಕಾಮದಾ | ಅಕಳಂಕ ತುಲಸಿ ಸರ |
ಪೊಕ್ಕಳ ಕಮಲ ಸುಂದರ | ಅಕುಟಿಲ ಹೃದಯಮಂದಿರ |
ಸಕಲಕಾಲದಲಿ ನಿಜ | ಭಕುತರಿಗೆ ಒಲಿದಿಪ್ಪ |
ಅಖಿಳ ಲೋಕಾಧೀಶ ಮುಕುತಾರ್ಥ ಮುರವೈರಿ||1||

ಉಂಗುರ ಕೈ ಬೆರಳ ಕರ ರ| ಥಾಂಗ ಶಂಖ ಪಾಣಿ
ಮಂಗಳಾಂಗಿಯ ರಮಣಾ |
ಮುಂಗೈಯ ಕಡಗ ಕಂಕಣ ಬಾಹು ಭುಜಕೀರ್ತಿ |
ಮುಂಗೈಯ ಫಣಿಯ ತಿಲಕಾ |
ಬಂಗಾರದಂಬರ ಭವದೂರಾ ಪದದಲ್ಲಿ |
ಪೊಂಗೆಜ್ಜೆ ಸರ್ವಾಭರಣದಿಂದ ಒಪ್ಪುವಾ ||2||

ಪಾಂಡೆ ದೇಶವಾಸಾ ಪಾಂಡವರ ಸಂರಕ್ಷಕ |
ಚಂಡ ಪ್ರಚಂಡ ಮಹಿಮಾ | ಗಂಡುಗಲಿಗಳ ಗಂಡಾ |
ಕೊಂಡಾಡಿದವರಿಗೆ ತಂಡ | ತಂಡದ ವರವೀವಾ |
ಮಂಡಲದೊಳಧಿಕ ಮಂಡೂಕ ವರದ | ಉದ್ದಂಡ ವಿಜಯವಿಠ್ಠಲ|
ಅಂಡಜಗಮನ ಕೃಷ್ಣಾ ತಿಮ್ಮಾ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.