← ಶ್ರೀರಾಮಕೃಷ್ಣ

ಭರತಖಂಡದ ನೀಲಗಗನವ

📂 ಶ್ರೀರಾಮಕೃಷ್ಣ
✍️ ಕುವೆಂಪು
🏷️ ಕೀರ್ತನೆಗಳು
🎵 ರಾಗ: ಮಧುವಂತಿ
🥁 ತಾಳ: ಝಪತಾಲ
ಭರತಖಂಡದ ನೀಲಗಗನವ ತಿಮಿರ ಮುಸುಗಿರಲು,
ಭಾರತೀಯರು ತಮ್ಮ ಧ್ಯೇಯವ ಮರೆತು ಮಲಗಿರಲು ,
ಪರಮಹಂಸನೆ, ಉದಯಸೂರ್ಯನ ತೆರದಿ ರಂಜಿಸಿದೆ
ಹೃದಯ ನಭದ ಜ್ಞಾನತಿಮಿರವನಿರದೆ ಭಂಜಿಸಿದೆ
ಸರ್ವಮಾರ್ಗಗಳೊಂದೆ ನಿಲಯಕೆ ಪೋಪುವೆಂಬುದನು
ಯೋಗವಿದ್ಯೆಯೊಳರಿತು ಮಾನವಕುಲಕೆ ಬೋಧಿಸಿದೆ;
ಕ್ರೈಸ್ತ ಹಿಂದೂ ಮಹಮದೀಯರೆ ಬೌದ್ಧಮೊದಲಾದ
ಮತಗಳಾತ್ಮವದೊಂದೆ ಎಂಬುದ ತಿಳುಹಿ ಪಾಲಿಸಿದೆ
ಕ್ರಿಸ್ತ ಮಹಮದ ರಾಮ ಕೃಷ್ಣ ಜೊರಾಸ್ತ್ರ ಗೌತಮರು
ದಿವ್ಯ ವೇದ ಕೊರಾನು ಬೈಬಲು ತಲ್ಮಡಾದಿಗಳು
ಗುಡಿಯು ಚರ್ಚು ಮಸೀದಿ ಆಶ್ರಮ ಅಗ್ನಿಪೂಜೆಗಳು
ಕಾಶಿ ಮಕ್ಕಗಳೆಲ್ಲ ನಿನ್ನೊಳಗೈಕ್ಯ 'ವಾಗಿಹವು' |
ದಕ್ಷಿಣೇಶ್ವರ ದೇವನಿಲಯದ ಪರಮಯೋಗೀಂದ್ರ
ಶ್ರೀ ವಿವೇಕಾನಂದ ಪೂಜಿತನಾತ್ಮಭಾವಿತನೆ
ಲೋಕಜೀವರಿಗಾತ್ಮಶಕ್ತಿಯ ನೀಡಿ ಕಾಪಾಡು
ನೆನೆವರೆಲ್ಲರ ಹೃದಯವಾಗಲಿ ನಿನ್ನ ನೆಲೆವೀಡು |
← ಶ್ರೀರಾಮಕೃಷ್ಣ ಕುವೆಂಪು ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.