📂 ಶ್ರೀಸ್ವಾಮಿ ವಿವೇಕಾನಂದ
✍️ ಸ್ವಾಮಿ ಹರ್ಷಾನಂದ
🏷️ ಕೀರ್ತನೆಗಳು
🎵 ರಾಗ: ಅಢಾಣಾ
🥁 ತಾಳ: ತ್ರಿತಾಲ
ಯಾರನು ಬಯಸಿ ಶ್ರೀಭುವನೇಶ್ವರಿ
ಹರಕೆಯ ಹೊತ್ತಳೊ ವೀರೇಶ್ವರನಲಿ
ವೀರೇಶ್ವರ ಶಿವ ಯಾವನ ರೂಪದಿ
ಧರೆಯನು ಪಾವನಗೈದನೊ ಅಂತಹ
ವೀರ ವಿವೇಕಾನಂದ ನಮೋ ||
ಯಾವನ ಲೀಲೆಯ ಸಹಿಸದೆ ಮಾತೆಯು
'ಶಿವನೇ ನೀ ಬಾರೆನ್ನುತ ಮೊರೆಯಿಡೆ
ಇವನನು ಏತಕೆ ಕಳುಹಿದೆ?' ಎನ್ನುತ
ಯಾವನ ಹಂಗಿಸುತಿದ್ದಳೊ ಅಂತಹ
ವೀರ ವಿವೇಕಾನಂದ ನಮೋ ||
ಇರುವನೊ ದೇವರು? ಇಲ್ಲವೋ?' ಎನ್ನುತ
ಗುರುವನು ಭರದಿಂ ಪ್ರಶ್ನಿಸಿ ಕೂಡಲೆ
'ಇರುವನು ತೋರುವೆ ನಿನಗೂ!' ಎನ್ನುವ
ಮರುದನಿಯಿಂದ ಚಕಿತನಾದಂತಹ
ವೀರ ವಿವೇಕಾನಂದ ನಮೋ ||
ರಾಮಕೃಷ್ಣರಲಿ ಸೇವಾವೃತ್ತಿಯ
ಪ್ರೇಮದಿ ಮಾಡುತ ಸಾಧನೆಗೈಯುತ
ಬ್ರಹ್ಮದ ಅನುಭವ ಬೇಗನೆ ಪಡೆಯುತ
ಕಾಮಿನಿ-ಕಾಂಚನ-ಬಂಧನ ನೀಗಿದ
ವೀರ ವಿವೇಕಾನಂದ ನಮೋ ||
ಗುರುವಿನ ಪ್ರಸ್ಥಾನಾನಂತರದಲಿ
ವಿರಾಗ ಪಡೆಯುತ ಕಾವಿಯ ಧರಿಸುತ
ಭಾರತ ಭುವಿಯಲಿ ಸುತ್ತುತ ತಿರುಗುತ
ವಿರಸವ ವೀಕ್ಷಿಸಿ ದುಃಖಿಸಿದಂತಹ
ವೀರ ವಿವೇಕಾನಂದ ನಮೋ ||
ದೇಶವಿದೇಶದಿ ವೇದದ ತತ್ತ್ವವ
ಪ್ರಸಾರ ಮಾಡುತ ಸರ್ವರ ಹೃದಯದಿ
ಈಶಪ್ರೇಮವ ಮೊಳೆಯಿಸಿ ಬೆಳೆಯಿಸಿ
ಶ್ರೀಶನ ಚರಣದಿ ಲಯವಾದಂತಹ
ವೀರ ವಿವೇಕಾನಂದ ನಮೋ ||
← ಶ್ರೀಸ್ವಾಮಿ ವಿವೇಕಾನಂದ ಸ್ವಾಮಿ ಹರ್ಷಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.