← ಶ್ರೀಕೃಷ್ಣ
ವಿದುರನ ಭಾಗ್ಯವಿದು
ವಿದುರನ ಭಾಗ್ಯವಿದು ||
ಇದ ಕಂಡು ಜಗವೆಲ್ಲ ತಲೆದೂಗುತಿಹುದು ||
ಇದ ಕಂಡು ಜಗವೆಲ್ಲ ತಲೆದೂಗುತಿಹುದು ||
ಕುರುರಾಯನು ಖಳನನುಜನು ರವಿಜನು
ಗುರುಗಾಂಗೇಯರು ನೋಡುತಿರೆ |
ಹರಿಸಿ ರಥವನು ಬೀದಿಯಲಿ ಬರುತಲಿಹ
ಹರಿಯನು ಕಂಡನು ಹರುಷದಲಿ ||
ಗುರುಗಾಂಗೇಯರು ನೋಡುತಿರೆ |
ಹರಿಸಿ ರಥವನು ಬೀದಿಯಲಿ ಬರುತಲಿಹ
ಹರಿಯನು ಕಂಡನು ಹರುಷದಲಿ ||
ದಾರಿಲಿ ಬರುತಿಹ ಮುರವೈರಿಯನು ಕಂಡು
ಹಾರುತ ಚೀರುತ ಕುಣಿಯುತಲಿ |
ಹರುಷದ ಕಂಬನಿ ಧಾರೆಯ ಸುರಿಸುತ
ಬಾರಿಬಾರಿಗು ಸಂತೋಷದಿ ಹಿಗ್ಗುವ ||
ಹಾರುತ ಚೀರುತ ಕುಣಿಯುತಲಿ |
ಹರುಷದ ಕಂಬನಿ ಧಾರೆಯ ಸುರಿಸುತ
ಬಾರಿಬಾರಿಗು ಸಂತೋಷದಿ ಹಿಗ್ಗುವ ||
ಆಟಕೆ ಲೋಕಗಳೆಲ್ಲವ ಸೃಜಿಸುವ
ನಾಟಕಧರ ತನ್ನ ಲೀಲೆಯಲಿ |
ನೀಟಾದವರ ಮನಗಳ ಜರಿದು
ಕುಟೀರದಲಿ ಬಂದು ಕುಳಿತ ಹರಿ ||
ನಾಟಕಧರ ತನ್ನ ಲೀಲೆಯಲಿ |
ನೀಟಾದವರ ಮನಗಳ ಜರಿದು
ಕುಟೀರದಲಿ ಬಂದು ಕುಳಿತ ಹರಿ ||
ಅಡಿಗಡಿಗೆ ತನ್ನ ತನುಮನ ಹರಹಿ
ಅಡಿಗೆರಗುತ ಗದ್ಗದ ಸ್ವರದಿ |
ನುಡಿಗಳು ತೊದಲಲು ರೋಮಾಂಚನವಾಗಲು
ದುಡುದುಡು ಓಡುತ ದಶದಿಶೆಗೆ ||
ಅಡಿಗೆರಗುತ ಗದ್ಗದ ಸ್ವರದಿ |
ನುಡಿಗಳು ತೊದಲಲು ರೋಮಾಂಚನವಾಗಲು
ದುಡುದುಡು ಓಡುತ ದಶದಿಶೆಗೆ ||
ಕಂಗಳ ಉದಕದಿ ಪಾದವ ತೊಳೆದು
ಗಂಧವ ಪೂಸಿ ತನು ಮರೆದು |
ಮಂಗಳ ಮಹಿಮನ ಚರಣಕ್ಕೆರಗಿ
ಪುಷ್ಪಂಗಳ ಪೂಜೆಯ ಮಾಡಿದನು ||
ಗಂಧವ ಪೂಸಿ ತನು ಮರೆದು |
ಮಂಗಳ ಮಹಿಮನ ಚರಣಕ್ಕೆರಗಿ
ಪುಷ್ಪಂಗಳ ಪೂಜೆಯ ಮಾಡಿದನು ||
ಕ್ಷೀರವಾರಿಧಿಶಯನಗೆ ಆ ವಿದುರನು
ಕ್ಷೀರವನುಣಬಡಿಸಿದ ಅದನು |
ವಾರಿಜನಾಭನು ಕರಸಂಪುಟದಿ
ಆರೋಗಣಿಸಿದನು ಘನತೆಯಲಿ ||
ಕ್ಷೀರವನುಣಬಡಿಸಿದ ಅದನು |
ವಾರಿಜನಾಭನು ಕರಸಂಪುಟದಿ
ಆರೋಗಣಿಸಿದನು ಘನತೆಯಲಿ ||
ಒಂದು ಕುಡುತೆ ಹಾಲ ಹರಿಯು ತಾ ಸವಿದು
ಮುಂದಕೆ ಹರಿಸಿದ ಧರೆಯ ಮೇಲೆ |
ಇಂದಿರೆಯರಸನ ಚರಿತೆ ವಿಚಿತ್ರವು
ಚಂದದಿ ಹರಿಯಿತು ಬೀದಿಯಲಿ ||
ಮುಂದಕೆ ಹರಿಸಿದ ಧರೆಯ ಮೇಲೆ |
ಇಂದಿರೆಯರಸನ ಚರಿತೆ ವಿಚಿತ್ರವು
ಚಂದದಿ ಹರಿಯಿತು ಬೀದಿಯಲಿ ||
ದೊರೆ ನಿಮ್ಮ ಕರೆಸಿದ ಬರಬೇಕು ಎನ್ನಲು
ಹರಿಯು ನಸುನಗುತಲಿ ಹೊರಟು ನಿಂತ |
ಧರೆಗುಂಗುಷ್ಠವನೂರಲು ರಾಜರು
ಉರುಳಿಬಿದ್ದರು ಶ್ರೀಪಾದದ ಮೇಲೆ ||
ಹರಿಯು ನಸುನಗುತಲಿ ಹೊರಟು ನಿಂತ |
ಧರೆಗುಂಗುಷ್ಠವನೂರಲು ರಾಜರು
ಉರುಳಿಬಿದ್ದರು ಶ್ರೀಪಾದದ ಮೇಲೆ ||
ಕರುಣಾಕರ ಶ್ರೀಹರಿ ತನ್ನ ಭಕ್ತರ
ನಿರುತದಿ ಪೊರೆವನು ಆಯತದಿ |
ಸಿರಿಯರಸ ನಮ್ಮ ಪುರಂದರವಿಟ್ಠಲನ
ಶರಣರೆ ಧನ್ಯರು ಧರೆಯೊಳಗೊ ||
ನಿರುತದಿ ಪೊರೆವನು ಆಯತದಿ |
ಸಿರಿಯರಸ ನಮ್ಮ ಪುರಂದರವಿಟ್ಠಲನ
ಶರಣರೆ ಧನ್ಯರು ಧರೆಯೊಳಗೊ ||