← ಶ್ರೀಕೃಷ್ಣ

ಕೀರ್ತನೆಯ ಮಾಡಿ ಕೈವಲ್ಯ ಪಡೆವರು

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಕಲ್ಯಾಣೀ
🥁 ತಾಳ: ಝಂಪೆತಾಳ
ಕೀರ್ತನೆಯ ಮಾಡಿ ಕೈವಲ್ಯ ಪಡೆವರು ಜನರು- ಹರಿ ||ಪ||

ಮೂರ್ತಿ ಶ್ರೀ ಚೆನ್ನಕೇಶವನ ಮನದೊಳಗಿಟ್ಟು ||ಅ||

ಹಲವು ಮಾಯಗಳಿಂದ ಹಂಬಲಿಸಿ ಕೆಡಬೇಡ
ಬಲವಂತರೊಡನೆ ಹಗೆ ಮಾಡಬೇಡ
ಕುಲದಲ್ಲಿ ಜನಿಸಿ ಕುಚೋದ್ಯ ಮಾಡಲುಬೇಡ
ನಲಿದು ಹರಿಯ ಪೊಗಳದ ನಾಲಗೆಯು ಬೇಡ ||1||

ಮಂದಮತಿಗಳ ಕೂಡ ಮಹಕಥೆಯ ನುಡಿಬೇಡ
ಯತಿಯಾದ ಮೇಲೆ ಸತಿಸುತರಾಸೆ ಬೇಡ
ಹಿತ ತಪ್ಪಿ ನಡೆವಂಥ ಹೆಂಡತಿಯು ಬೇಡ ||2||

ಕೆಟ್ಟು ಹೋದವರನ್ನು ತಿರುಗಿ ಕರೆತರಬೇಡ
ಮುಟ್ಟಾದ ಮೇಲೆ ಮೋಹಿಸಿ ಕೂಡಬೇಡ
ಭ್ರಷ್ಟನಾಡಿದನೆಂದು ಸಿಟ್ಟಿನಲಿ ನುಡಿಬೇಡ
ಕಷ್ಟದೆಸೆಯೊಳು ಧೈರ್ಯ ಬಿಟ್ಟು ಕೆಡಬೇಡ ||3||

ವಿಟಜನರ ಕೂಡಿ ವೇಶ್ಯಾವಾರ್ತೆಗಿಳಿಯಬೇಡ
ಸಟೆ ಹೇಳಿ ಸಂಸಾರ ಕೆಡಿಸಬೇಡ
ತುಟಿ ಮೀರ್ದ ಹಲ್ಲಂತೆ ದೂತ ಎಂದಿಗು ಬೇಡ
ನಿಟಿಲನೇತ್ರನು ನಾನೆನುವ ಜಂಭ ಬೇಡ ||4||

ತೀರ್ಥ ಯಾತ್ರೆಗೆ ಪೋಗಿ ತಿರುತಿರುಗಿ ಬಳಲಿ ಕೃ
ತಾರ್ಥನಾದೆನು ಎಂಬ ಘನತೆ ಬೇಡ
ಪಾರ್ಥಸಾರಥಿ ಕಾಗಿನೆಲೆಯಾದಿಕೇಶವನ
ಸಾರ್ಥಕದಿ ಭಜಿಸಿ ಸುಖಿಯಾಗು ಮನುಜ ||5||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.