← ಶ್ರೀಕೃಷ್ಣ

ತೋರೆ ಬೇಗನೆ ಸಖಿ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಕೇದಾರಗೌಳ
🥁 ತಾಳ: ಆದಿತಾಳ
ತೋರೆ ಬೇಗನೆ ಸಖಿ
ತೋರ ಮುತ್ತಿನ ಹಾರ ಭಾರವಾಗಿದೆ ನನಗೆ ||ಪ||

ಈರೇಳು ಲೋಕವ ಪೊರೆವ ದಯಾನಿಧಿ
ಬಾರನೇತಕೆ ಮನೆಗೆ ಹೇ ಸಖಿಯೆ ||ಅ||

ತರಣಿತನಯಸುತನ ಬಾಯೊಳನೃತವ
ಭರದಿಂದ ನುಡಿಸಿದನ
ತರಣಿಸುತನ ಬಾಣವೆರಗದಂದದಿ ರಥವ
ಧರೆಗೆ ಒತ್ತಿದ ದೇವನ
ತರಣಿಯ ಮರೆಮಾಡಿ ಶಿರವ ತರಿಯುವಂತೆ
ನರಗೆ ಸೂಚಿಸಿದಾತನ
ತರಣಿಯೊಡನೆ ಪಂಥವಾಡಿ ತಿರುಗಿದ
ತರಳನಾಳಿದನ ತೋರಿಸೆ ಹೇ ಸಖಿಯೆ ||1||

ಗೋತ್ರಭೇದಿ ಸುತನ ಸುತನ ಸತಿಯ
ಮಾತುಳನಾದವನ
ಕತ್ತಲೆಯಲಿ ಪೋಗಿ ಕುತ್ತಿಟ್ಟವನ ಮೈಯ
ಸುತ್ತಿ ಬಾಧಿಸುತಿಪ್ಪನ
ತತ್ತ್ವವರಿತು ಸುತತ್ತ್ವ ಬೋಧಿಸಿ
ಉತ್ತರವಿತ್ತವನ
ಮುತ್ತಯ್ಯನ ತಾಯ ಪೆತ್ತ ದೇವನ ಎನ್ನ
ಹತ್ತಿರ ಕರೆದು ತಾರೆ, ಹೇ ಸಖಿಯೆ ||2||

ವರಮುನಿಗಳು ಕೂಡಿ ಸರ್ವೋತ್ತಮನಾರೊ
ಪರಿಶೋಧಿಸಬೇಕೆಂದು
ಭರದಿಂದ ಭೃಗು ಮುನಿ ಬಂದು ಕೋಪಿಸೆ ಬೇಗ
ಚರಣವನೊತ್ತಿದನ
ಪರಿಪರಿಯಲಿ ದೇವ ಪರಮ ಭಕ್ತರ ಕಾವ
ಸುರರಿಗಭಯವಿತ್ತನ
ವರವೇಲಾಪುರದಾದಿ ಕೇಶವನ
ಮರೆಯಲಾರೆನೆ ಮನದಿ- ಹೇ ಸಖಿಯೆ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.