← ಇತರೆ

ಹಲವು ಜೀವನವ ಒಂದೆಲೆ ನುಂಗಿತು

📂 ಇತರೆ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಹಿಂದೂಸ್ತಾನಿ ಕಾಫಿ
🥁 ತಾಳ: ಮುಟ್ಟೆತಾಳ
ಹಲವು ಜೀವನವ ಒಂದೆಲೆ ನುಂಗಿತು- ಕಾಗಿ
ನೆಲೆಯಾದಿ ಕೇಶವನು ಬಲ್ಲನೀ ಬೆಡಗ ||ಪ||

ಹರಿಯ ನುಂಗಿತು ಪರ ಬ್ರಹ್ಮನ ನುಂಗಿತು
ಸುರರಿಗುಂಟಾದ ದೇವರ ನುಂಗಿತು
ಉರಿಗಣ್ಣ ಶಿವನ ಒಂದೆಲೆ ನುಂಗಿತೆಲೊ ದೇವ
ಹರಿಯ ಬಳಗವ ಒಂದೆಲೆ ನುಂಗಿತು ||1||

ಎಂಟು ಗಜವನು ನುಂಗಿ ಕಂಟಕರಯಿವರ ನುಂಗಿ
ಉಂಟಾದ ಗಿರಿಯ ತಲೆಯ ನುಂಗಿತು
ಕಂಟವ ಪಿಡಿದ ಬ್ರಹ್ಮನ ನುಂಗಿತೆಲೊ ದೇವ
ಎಂಟಾರು ಲೋಕ ಒಂದೆಲೆ ನುಂಗಿತು ||2||

ಗಿಡವ ನುಂಗಿತು ಗಿಡದೊಡತೊಟ್ಟನು ನುಂಗಿತು
ಗಿಡುವಿನ ತಾಯ ತಂದೆಯ ನುಂಗಿತು
ಬೆಡಗ ಬಲ್ಲರೆ ಪೇಳಿ ದೇವ ಕನಕದಾಸ ಎ
ನ್ನೊಡೆಯಾದಿಕೇಶವ ಬಲ್ಲನೀ ಬೆಡಗ ||3||
← ಇತರೆ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.