← ಶ್ರೀಕೃಷ್ಣ

ಕರುಣಿಸೋ ರಂಗಾ

📂 ಶ್ರೀಕೃಷ್ಣ
✍️ ಪುರಂದರದಾಸ
🏷️ ಕೀರ್ತನೆಗಳು
🎵 ರಾಗ: ಜೋಗಿಯಾ
🥁 ತಾಳ: ತ್ರಿತಾಲ
ಕರುಣಿಸೋ ರಂಗಾ ಕರುಣಿಸೋ |
ಹಗಲೂ ಇರುಳೂ ನಿನ್ನ ಸ್ಮರಣೆ ಮರೆಯದಂತೆ ||
ರುಕುಮಾಂಗದನಂತೆ ವ್ರತವ ನಾನರಿಯೆ
ಶುಕಮುನಿಯಂತೆ ಸ್ತುತಿಸಲರಿಯೆ |
ಬಕವೈರಿಯಂತೆ ಧ್ಯಾನ ಮಾಡಲರಿಯೆ
ದೇವಕಿಯಂತೆ ಮುದ್ದಿಸಲರಿಯೆನೋ ||
ಗರುಡನಂದದಿ ಪೊತ್ತು ತಿರುಗಲು ಅರಿಯೆ
ಕರೆಯಲರಿಯೆನೋ ಕರಿರಾಜನಂತೆ |
ವರಕಪಿಯಂತೆ ದಾಸ್ಯ ಮಾಡಲರಿಯೆ
ಸಿರಿಯಂತೆ ಸುಖವಿತ್ತು ಸೇವಿಸಲರಿಯೆನೋ ||
ಬಲಿಯಂತೆ ದಾನವ ಕೊಡಲಾರೆನೊ ಭಕ್ತಿ-
ಛಲವನರಿಯೆನೋ ಪ್ರಹ್ಲಾದನಂತೆ |
ಒಲಿಸಲರಿಯೆನೋ ಅರ್ಜುನನಂತೆ ಸಖನಾಗಿ
ಸಲಹೋ ದೇವರ ದೇವ ಪುರಂದರವಿಟ್ಠಲ ||
← ಶ್ರೀಕೃಷ್ಣ ಪುರಂದರದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.