← ಅದ್ವೈತ

ಓ ನನ್ನ ಚೇತನ

📂 ಅದ್ವೈತ
✍️ ಕುವೆಂಪು
🏷️ ಕೀರ್ತನೆಗಳು
ಓ ನನ್ನ ಚೇತನ,
ಆಗು ನೀ ಅನಿಕೇತನ !
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ !

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆಂದು ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!
← ಅದ್ವೈತ ಕುವೆಂಪು ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.