← ವೈರಾಗ್ಯ

ಅಡಿಗೆಯನು ಮಾಡಬೇಕಣ್ಣ

📂 ವೈರಾಗ್ಯ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಪಂತುವರಾಳಿ
🥁 ತಾಳ: ಛಾಪುತಾಳ
ಅಡಿಗೆಯನು ಮಾಡಬೇಕಣ್ಣ- ನಾನೀಗ ಜ್ಞಾನ
ದಡಿಗೆಯನು ಮಾಡಬೇಕಣ್ಣ ||ಪ||

ಅಡಿಗೆಯನ್ನು ಮಾಡಬೇಕು
ಮಡಿಸಬೇಕು ಮದಗಳನ್ನು
ಒಡೆಯನಾಜ್ಞೆಯಿಂದ ಒಳ್ಳೆ
ಸಡಗರದಲಿ ಮನೆಯ ಸಾರಿಸಿ ||ಅ||

ತನ್ನ ಗುರುವನ್ನು ನೆನೆಯಬೇಕಣ್ಣ
ತನುಭಾವವೆಂಬ ಭಿನ್ನ ಕಲ್ಮಶವಳಿಯಬೇಕಣ್ಣ
ಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚ
ನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ ||1||

ತತ್ವಭಾಂಡವ ತೊಳೆಯಬೇಕಣ್ಣ- ಸತ್ಯಾತ್ಮನಾಗಿ
ಅರ್ತಿ ಅಕ್ಕಿಯ ಮಥಿಸಬೇಕಣ್ಣ
ಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನು
ಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ ||2||

ಜನನ ಸೊಂಡಿಗೆ ಹುರಿಯಬೇಕಣ್ಣ- ನಿಜವಾಗಿ ನಿಂತು
ತನುವು ತುಪ್ಪವ ಕಾಸಬೇಕಣ್ಣ
ಕನಕಗಿರಿ ಕಾಗಿನೆಲೆಯಾದಿಕೇಶವನ ದಾಸ
ಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವ ಚಂದದಿ ಸವಿದುಣ್ಣಲಿಕ್ಕೆ ||3||
← ವೈರಾಗ್ಯ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.