← ಇತರೆ

ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿ

📂 ಇತರೆ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಸಾವೇರೀ
🥁 ತಾಳ: ಮುಟ್ಟೆತಾಳ
ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿ
ಸಹಜವಿದು ಸಜ್ಜನರ ಮನಕೆ ಸಮ್ಮತವು ||ಪ||

ಕರಿಕೆಯಿಲ್ಲದ ಬಾಳು ಕರಿವರದನ ದಯೆ ಕೇಳು
ಅರಿತವರಿರೆ ಮನೆಯೊಳು ಅದು ಸ್ವರ್ಗವು ಕೇಳು
ಕರಣಿಕರೊಳಗಣ ನಂಟು ಕಟ್ಟಿದ ಹಣವಿನ ಗಂಟು
ಗುರುವಿನ ವಾಕ್ಯದಿ ಭಕ್ತಿ ಇಹಪರಕದು ಮುಕ್ತಿ ||1||

ಒಕ್ಕಲಿಗಾಗದ ಗವುಡ ಮೇಲೆರಗಿ ಕುಕ್ಕುವ ಲಗಡ
ಮಕ್ಕಳ ಪಡೆವುದು ಪುಣ್ಯ ನಲಿವು ನಗೆಗಳ ಪಣ್ಯ
ಇಕ್ಕುವ ಅನ್ನವು ಧರ್ಮ ಇಹಪರಕದು ಅತಿ ಧರ್ಮ
ಬಿಕ್ಕಳಿಕಿಕ್ಕಿದ ವ್ಯಾಧಿ ಯಮಪುರಕದು ಹಾದಿ ||2||

ಕಂಡರೆ ಸೇರದ ನಾರಿ ಕೆಂಡವನುಗುಳುವ ಮಾರಿ
ದಂಡವ ತೆರಿಸುವ ಪುತ್ರ ಹಗೆಗಳಿಗವ ಮಿತ್ರ
ಉಂಡರೆ ಸೇರದ ತಾಯಿ ಉರಗನ ಮೆಕ್ಕೆ ಕಾಯಿ
ಹಿಂಡನಗಲಿದ ಗೋವು ಹುಲಿಗಿಕ್ಕಿದ ಮೇವು ||3||

ಪರನಾರಿಯರೊಡನಾಟ ಗರಳವನಟ್ಟುಂಬಾಟ
ಬರೆದೂ ಅರಿಯದ ಲೆಕ್ಕ ಕಡೆಯಲಿ ಬಹು ದುಕ್ಕ
ಇರಿತಕೆ ಬೆದರುವ ಮದಕರಿ ಬಾಯ್ಕಿರಿವ ಕೋಡಗ ಮರಿ
ಕರೆ ಬರಲರಿಯದ ಗಂಡ ಅವ ನಾಚಿಕೆ ಭಂಡ ||4||

ಸಮಯಕ್ಕೊದಗದ ಅರ್ಥ ಸಾವಿರವಿದ್ದರು ವ್ಯರ್ಥ
ಸವತಿಯರೊಳಗಣ ಕೂಟ ಎಳನಾಗರ ಕಾಟ
ಅಮರರಿಗೊದಗದ ಯಾಗ ಆಡಿನ ಮೇಲಣ ರೋಗ
ನಮ್ಮ ಆದಿಕೆಶವನ ಭಕ್ತ ಅವ ಜೀವನ್ಮುಕ್ತ ||5||
← ಇತರೆ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.