← ಶ್ರೀನರಸಿಂಹ

ಆವುದೊಳ್ಳೆಯದೊ ನಿನ್ನಂಗ

📂 ಶ್ರೀನರಸಿಂಹ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಸಾವೇರೀ
🥁 ತಾಳ: ಆಟತಾಳ
ಆವುದೊಳ್ಳೆಯದೊ ನಿನ್ನಂಗ - ಚೆಲುವ
ದೇವ ಬಂಕಾಪುರದ ಲಕುಮಿ ನರಸಿಂಗ ||ಪ||

ಜಗದೊಳಗೆ ತಾನು ತಂದೆಯ ಮಾತು ಕೇಳದಾ
ಮಗನು ಇಹ ಪರಕೆ ಸಲುವ ಪ್ರಾಜ್ಞನೆ?
ಬಗೆಗೊಳಿಸಿ ಪ್ರಹ್ಲಾದ ಪಿತನೊಡಲ ನಿನ್ನ ಕೂ
ರುಗುರಿನಿಂ ಬಗೆಸಿದಾತಂಗೆ ಮುಕುತಿಯನೀವೆ ||1||

ಪೊಡವಿಯೊಳು ಅಣ್ಣನಾಜ್ಞೆಯ ಮೀರಿ ನಡೆಯುತಿಹ
ಒಡಹುಟ್ಟಿದವಗೆ ಕೈವಲ್ಯವುಂಟೆ?
ದೃಢದಲಿ ವಿಭೀಷಣಾಗ್ರಜನನ್ನು ಬಾಣದಲಿ
ಕೆಡಹಿಸಿದ ಬಳಿಕವಗೆ ಸ್ಥಿರಪಟ್ಟ ಕಟ್ಟಿದೆ ||2||

ರೂಢಿಯಲಿ ಗುರುದ್ರೋಹವನು ಮಾಡಿದವನ ಮೊಗ
ನೋಡಿದಾಗಲೆ ಪ್ರಾಯಶ್ಚಿತ್ತವುಂಟು
ನೋಡಿದಾಗಲೆ ಬೃಹಸ್ಪತಿಸತಿಗೆ ಅಳುಪಿದನ
ಸೂಡಿದಾತನ ಸ್ನೇಹವನು ಮಾಢಿಕೊಂಡಿರ್ಪೆ ||3||

ದೇಶದೊಳು ವಂಶಕಂಟಕರೆನಿಸಿದವರೊಳಗೆ
ಭಾಷಣವ ಮಾಡಬಪ್ಪುದೆ ಪ್ರಾಜ್ಞರು?
ಬೇಸರಿಸದೆ ಕೌರವರ ಕೊಂದ ಪಾಂಡವರ ಸಂ
ತೋಷದಲಿ ಪಕ್ಷಿಕರ ಮಾಡಿಕೊಂಡಿರ್ಪೆ ||4||

ಪೊಡವಿಪತಿ ಕೇಳು ಶ್ರೀ ಆದಿಕೇಶವನೆ ಹಿಂ
ಗಡೆಯಲ್ಲಿ ಮನೆಯ ಕಟ್ಟಿಸಬಾರದೇ
ಬಿಡೆಯವಿಲ್ಲದೆ ಸಭಾಮಧ್ಯದಲಿ ಹೆಂಡತಿಯ
ತೊಡೆಯ ಮೇಲ್ಕುಳ್ಳಿರಿಸಿಕೊಂಡಿರ್ಪ ಹಿರಿಯತನ ||5||
← ಶ್ರೀನರಸಿಂಹ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.