← ವೈರಾಗ್ಯ

ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ 

📂 ವೈರಾಗ್ಯ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಗೌಳಿಪಂತು
🥁 ತಾಳ: ತ್ರಿಪುಟತಾಳ
ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ ||ಪ||
ಕಳ್ಳರಿಗೆ ಕಳ್ಳನಂತೆ- ಬೆಳ್ಳಕ್ಕಿಯಂದದಿ ಡಂಭ ||ಅ||

ಗಾಣದೆತ್ತಿನಂತೆ ಕಣ್ಣ ಮುಚ್ಚಿ ಪ್ರದಕ್ಷಿಣೆಯ ಮಾಡಿ
ಕಾಣದೆ ತಿರುಗುವೆನೆರಡು ಕಣ್ಣಿದ್ದು ನಾನು
ಮಾಣಿಕ್ಯದ ರಾಶಿಯಲ್ಲಿ ಅಂಧಕರೈವರು ಕೂಡಿ
ಆಣಿಮುತ್ತ ಹಿಡಿದು ಹಿಡಿದು ಬಿಡುವ ಭ್ರಮಿತನಯ್ಯ ||1||

ಗುಂಡು ಮುಳುಗನ ಹಕ್ಕಿಯಂತೆ ಕಂಡ ಕಂಡ ನೀರ ಮುಳುಗಿ
ಮಂಡೆ ಶೂಲೆ ಬಾಹೋದಲ್ಲದೆ ಗತಿಯ ಕಾಣೆನೊ
ಮಂಡೂಕನಂದದಲಿ ನೀರ ತಡಿಯಲಿ ಕುಳಿತುಕೊಂಡು
ಮುಂಡೆ ಮುಸುಕನಿಕ್ಕಿ ಮೂಗು ಹಿಡಿದು ಬಿಡುವ ಭ್ರಮಿತನಯ್ಯ||2||

ಇಕ್ಕುಳದ ಕೈಯಲ್ಲಿ ಹಿಡಿದ ಕಾದ ಕಬ್ಬಿಣದಂತೆ
ಸಿಕ್ಕಿ ಸಿಡಿಮಿಡಿಗೊಂಬೆ ಗತಿಯ ಕಾಣದೆ
ಹೊಕ್ಕುಳ ಹೂವಿನ ಬಾಡಾದಾದಿಕೇಶವನ ಮೊರೆ
ಹೊಕ್ಕೆನಿಂದು ಮನ್ನಿಸಿ ಕಾಯೊ ದೇವದೇವೋತ್ತಮನೆ ||3||
← ವೈರಾಗ್ಯ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.