← ಶ್ರೀಕೃಷ್ಣ

ಕ್ಷಮಿಸುವುದೆಮ್ಮ ತಪ್ಪುಗಳ ಸ್ವಾಮಿ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಕಾನಡಾ
🥁 ತಾಳ: ಆಟತಾಳ
ಕ್ಷಮಿಸುವುದೆಮ್ಮ ತಪ್ಪುಗಳ ಸ್ವಾಮಿ
ಕ್ಷಮಶೀಲವೆಂಬ ದಾಸೋಹ ಬಿರುದಿನೊಳು ||ಪ||

ಕಮಲಜ ಹರಿ ರುದ್ರ ವಿಮಲ ಸುರರು ಸಾಧು
ಸಮರಲ್ಲವೆಂಬ ಶ್ರುತಿ ಸರಿಬಂತು ಸ್ವಾಮಿ ||ಅ||

ಶರಧಿಯೊಳಿರುತಿರ್ಪ ಚರಜೀವಿಗಳ ಗುಣಾ-
ಕರಿಸಿ ಇಷ್ಟೆಂದು ಪೇಳಲುಬಹುದು
ಸಿರಿವರದನ ಅಂತಃಕರಣಕೊಪ್ಪಿದ ನಿಮ್ಮ
ಇರವ ತಿಳಿಯಲು ನರರ ವಶವೆ ಸ್ವಾಮಿ ||1||

ಆಢಕದೊಳಗಂಬರವನೆ ಅಳೆದು ಲೆಕ್ಕ
ಕೂಡಿದ ಮಿತಿಯ ಪೇಳಲು ಬಹುದು
ರೂಢಿಗೀಶನ ಸೇವೆ ಮಾಡಿದ ಮುಕ್ತರ
ಈಡಿಲ್ಲವೆಂಬುದನಿತರರರಿವರೆ ಸ್ವಾಮಿ ||2||

ಈ ಶರೀರದೊಳಗಿಪ್ಪ ಕೇಶಗಳೆಲ್ಲವನು
ಬೇಸರಿಸದೆಣಿಸಿ ಹೇಳಲು ಬಹುದು
ಶೇಷಶಯನ ಕಾಗಿನೆಲೆಯಾದಿಕೇಶವ
ದಾಸರ ಮಹಿಮೆ ಕಾಣಲಿಕಾಗದು ಸ್ವಾಮಿ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.