← ಶ್ರೀಕೃಷ್ಣ

ನಂಬಬೇಡಿ ಸಿರಿಯ ತನ್ನದೆ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಮುಖಾರಿ
🥁 ತಾಳ: ಝಂಪೆತಾಳ
ನಂಬಬೇಡಿ ಸಿರಿಯ ತನ್ನದೆ?

ನಂಬಬೇಡಿ ಸಿರಿಯು ತನ್ನ
ದೆಂಬ ನಿಮಿಷದೊಳಗೇನಹುದೊ
ಡಂಬತನವಿದೇಕೆ ಹರಿಯ ಪಾ-
ದಾಂಬುಜವನು ಭಜಿಸಿ ನರರು

ಜಲಧಿಯನ್ನು ಪೀರ್ದ ಮುನಿಯ
ಜನನಿ ಪೆಸರ್ಗೆ ಕಿವಿಯನಾಂತ
ಖಳನ ಬಲವ ನಂಬಲಾತು
ತಲೆಯ ತವಿಸಿದವನ ಸಿರಿಯು
ಗಳಿಗೆಯೊಳಗೆ ಕೀಲು ಸಡಿಲದೆ - ಎಣಿಕೆ ಇಲ್ಲದ
ದಳವು ಯಮನನಗರಿಗೈದದೆ - ದೈವಕೃಪೆಯು
ತೊಲಗಲೊಡನೆ ದಾಳಿವರಿಯದೆ - ಕೇಳಿ ಜನರೆ ||1||

ಅಂಧರಾಯನಾತ್ಮಜರು ಮ-
ದಾಂಧರಾಗಿ ಮಲೆತು ಗೋತ್ರ
ಬಂಧುಗಳನು ಲೆಕ್ಕಿಸದೆ ಇಭ
ಪುರಿಯನಾಳಿದ ನೃಪತಿ ಕೌರ
ವೇಂದ್ರನರಸುತನವು ತೊಡೆಯದೆ - ಸಕಲ ಸೈನ್ಯ
ಬಂಧು ಬಳಗ ರಣದಿ ಮಡಿಯದೆ - ಶೌರಿ ಮುನಿಯ
ಲಂದು ಅವನ ಪದವು ಮುರಿಯದೆ - ಕೇಳಿ ಜನರೆ ||2||

ಧರಣಿಯ ಮುನ್ನಾಳ್ದ ನಹುಷ
ಸಗರರೆನಿಪ ಭೂಪತಿಗಳು ಸಿರಿಯ ಜಯಿಸಲಿಲ್ಲ - ಮಿಕ್ಕ
ನರರ ಪಾಡಿದೇನು ನೀವು
ಬರಿದೆ ಭ್ರಾಂತರಾಗಬೇಡಿರೊ - ಎಂದಿಗಾದರು
ಸ್ಥಿರವಿದಲ್ಲವೆಂದು ತಿಳಿಯಿರೊ - ಶ್ರೀ ಕಾಗಿನೆಲೆಯ
ವರದ ಕೇಶವನನು ಭಜಿಸಿರೊ - ಕೇಳಿ ಜನರೆ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.