← ಶ್ರೀಮಹಾಲಕ್ಷ್ಮಿ

ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮೀ

📂 ಶ್ರೀಮಹಾಲಕ್ಷ್ಮಿ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಶಂಕರಾಭರಣ
🥁 ತಾಳ: ಛಾಪುತಾಳ
ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ ||ಪ||

ನಿನಗಿಂತ ಕುಂದೇನೊ ಸನಕಾದಿಗಳ ಸ್ವಾಮಿ
ಮನಸಿಜನೊಡೆಯನೆ ಕನಕಗರ್ಭನ ಜನಕ ||ಅ||

ಮಚ್ಚ್ಯಾವತಾರ ನೀನಾದರೆ- ಆಕೆ
ಮಚ್ಚ್ಯಗಂಗಳೆ ತಾನಾದಳೊ
ಹೆಚ್ಚಿನ ಶಂಖವ ಪಿಡಿದರೆ- ಆಕೆ
ನಿಚ್ಚ ಶಂಖಕಂಠಳಾದಳಯ್ಯ| |1||

ನೀಲವರ್ಣ ನೀನಾದರೆ- ಆಕೆ
ನೀಲಕುಂತಳೆ ತಾನಾದಳೊ
ಲೋಲ ಕಮಲನಾಭನಾದರೆ- ಆಕೆ
ಬಾಲ ಕಮಲಮುಖಿಯಾದಳಯ್ಯ||2||

ಬೆಟ್ಟವ ನೀನೊಂದು ಪೊತ್ತರೆ- ಆಕೆ
ಬೆಟ್ಟದಂಥ ಕುಚವೆರಡು ಪೊತ್ತಳೊ
ಮೆಟ್ಟಿ ಶೇಷನ ನೀ ತುಳಿದರೆ- ಆಕೆ
ಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ ||3||

ಗಜರಾಜವರದ ನೀನಾದರೆ- ಆಕೆ
ಗಜಗಮನೆಯು ತಾನಾದಳಯ್ಯ
ನಿಜ ನರಸಿಂಹ ನೀನಾದರೆ- ಆಕೆ
ಭಜಿಸಿ ಸಿಂಹಮಧ್ಯೆಯಾದಳಯ್ಯ ||4||

ಈ ಪರಿಯೊಳು ನೀನು ಜನಿಸಿದೆ- ಭಲೆ
ಭಾಪುರೆ ಬಾಡದೊಳು ನೆಲೆಸಿದೆ
ಗೋಪಿಯರ ಮೋಹ ಸಲಿಸಿದೆ- ಚೆಲುವ
ಶ್ರೀಪತಿ ಆದಿಕೇಶವರಾಯ ಮೆರೆದೆ ||5||
← ಶ್ರೀಮಹಾಲಕ್ಷ್ಮಿ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.