← ಇತರೆ

ನೇಮವಿಲ್ಲದ ಹೋಮ

📂 ಇತರೆ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಮುಖಾರಿ
🥁 ತಾಳ: ಝಂಪೆತಾಳ
ನೇಮವಿಲ್ಲದ ಹೋಮವೇತಕೆ
ರಾಮನಾಮವಿರದ ಮಂತ್ರವೇತಕೆ ||ಪ||

ನೀರು ಮುಣುಗಲು ಏಕೆ ನಾರಿಯಳ ಬಿಡಲೇಕೆ
ವಾರಕೊಂದುಪವಾಸ ಮಾಡಲೇಕೆ
ನಾರಸಿಂಹನ ದಿವ್ಯ ನಾಮವನು ನೆನೆದರೆ
ಘೋರ ಘಾತಕವೆಲ್ಲ ತೊಲಗಿ ಹೋಗುವುದು ||1||

ಅಂಬರವ ತೊರೆಯಲೇಕೆ ತಾಂಬೂಲ ಬಿಡಲೇಕೆ
ಡಂಭಕದ ವೃತ್ತಿಯಲಿ ಇರಲೇತಕೆ
ಅಂಬುಜನಾಭನನು ಭಾವದಲಿ ನೆನೆದರೆ
ಇಂಬುಂಟು ವೈಕುಂಠವೆಂಬ ಪುರದೊಳಗೆ ||2||

ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆ
ಬೆಂದು ಹೋಗುವುವು ದುರಿತಂಗಳೆಲ್ಲ
ಬಂದ ದುಃಖಗಳೆಲ್ಲ ನಿಲ್ಲದಲೆ ಕಳೆಯುವುವು
ಚೆಂದಾಗಿ ನೆಲೆಯಾದಿಕೇಶವನ ನೆನೆಯೆ ||3||
← ಇತರೆ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.