← ಇತರೆ

ನೋಡಿ ಮರುಳಾಗದಿರು ಪರಸತಿಯರ

📂 ಇತರೆ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಭೈರವೀ
🥁 ತಾಳ: ಝಂಪೆತಾಳ
ನೋಡಿ ಮರುಳಾಗದಿರು ಪರಸತಿಯರ ||ಪ||
ನಾಡೊಳಗೆ ಕೆಟ್ಟವರ ಪರಿಯ ನೀನರಿತು ||ಅ||

ಶತಮಖವ ಮಾಡಿ ಸುರಸಭೆಗೈದ ನಹುಷ ತಾ
ನಾತುರದಿ ಶಚಿಗೆ ಮನಸೋತು ಭ್ರಮಿಸಿ
ಅತಿ ಬೇಗ ಚಲಿಸೆಂದು ಬೆಸಸಲಾ ಮುನಿಯಿಂದ
ಗತಿಗೆಟ್ಟು ಉರಗನಾಗಿದ್ದ ಪರಿಯರಿತು ||1||

ಸುರಪತಿಯು ಗೌತಮನ ಸತಿಗಾಗಿ ಕಪಟದಿಂ
ಧರೆಗೆ ಮಾಯಾವೇಷ ಧರಿಸಿ ಬಂದು
ಪರಮ ಮುನಿಯ ಶಾಪದಿಂದಂಗದೊಳು ಸಾ
ಸಿರ ಕಣ್ಗಳಾಗಿರ್ದ ಪರಿಯ ನೀನರಿತು ||2||

ಸ್ಮರನ ಶರತಾಪವನು ಪರಿಹರಿಸಲರಿಯದೆ
ದುರುಳ ಕೀಚಕನು ದ್ರೌಪದಿಯ ತುಡುಕಿ
ಮರುತ ಸುತ ಭೀಮನಿಂದಿರುಳೊಳಗೆ ಹತನಾಗೆ
ನರಗುರಿಯೆ ನಿನ್ನ ಪಾಡೇನು ಧರೆಯೊಳಗೆ ||3||

ಹರನ ವರವನು ಪಡೆದು ಶರಧಿ ಮಧ್ಯದೊಳಿದ್ದು
ದುರುಳ ದಶಶಿರನು ಜಾನಕಿಯನೊಯ್ಯೆ
ಧುರದೊಳಗೆ ರಘುವರನ ಶರದಿಂದ ಈರೈದು
ಶಿರಗಳನೆ ಹೋಗಲಾಡಿಸಿದ ಪರಿಯನರಿತು ||4||

ಇಂತಿಂಥವರು ಕೆಟ್ಟು ಹೋದರೆಂಬುದನರಿತು
ಭ್ರಾಂತಿಯನೆ ಬಿಟ್ಟು ಭಯಭಕ್ತಿಯಿಂದ
ಕಂತುಪಿತ ಕಾಗಿನೆಲೆಯಾದಿಕೇಶವನ ನಿ
ರಂತರದಿ ಭಜಿಸಿ ನೀ ಸತ್ಯಸುಖಿಯಾಗು ||5||
← ಇತರೆ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.