← ಶ್ರೀಕೃಷ್ಣ

ಬಂಟನಾಗಿ ಬಾಗಿಲ ಕಾಯ್ವೆ ಹರಿಯ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಕೇದಾರಗೌಳ
🥁 ತಾಳ: ಆಟತಾಳ
ಬಂಟನಾಗಿ ಬಾಗಿಲ ಕಾಯ್ವೆ ಹರಿಯ ||ಪ||

ವೈಕುಂಠದ ಸೊಂಪಿನ ದಾಸರ ಮನೆಯ ||ಅ||

ಹೊರಸುತ್ತು ಪ್ರಾಕಾರ ನಾ ಸುತ್ತಿ ಬರುವೆ
ಬರುವ ಹೋಗುವರ ವಿಚಾರಿಸುತಿರುವೆ
ಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ ಶ್ರೀ
ಹರಿಯ ಸಮ್ಮುಖದ ಓಲಗದೊಳಿರುವೆ ||1||

ತೊತ್ತು ತೊಂಡನಾಗಿ ಬಾಗಿಲ ಕಾಯ್ವೆ
ಚಿತ್ರದ ಚಾವಡಿ ರಜವನು ಬಳಿವೆ
ಮುತ್ತಿನ ರಂಗವಲ್ಲಿಯನಿಟ್ಟು ಬರೆವೆ
ರತ್ನಗಂಬಳಿ ಹೊತ್ತು ಹಾಸುವೆನು ||2||

ವೇಳೆವೇಳೆಗೆ ನಾನೂಳಿಗವ ಮಾಡುವೆ
ಆಲವಟ್ಟಿಗೆ ಚಾಮರವ ಬೀಸುವೆ
ತಾಳದಂಡಿಗೆ ಭೃಂಗಿ ಮೇಳಗಳ ಕೂಡಿ ಶ್ರೀ
ಲೋಲನ ಕೊಂಡಾಡಿ ಪಾಡುವೆನು ||3||

ಎಂಜಲ ಹರಿವಾಣಂಗಳ ಬೆಳಗುವೆ
ಕಂಜನಾಭನ ಪಾದಕಮಲವ ತೊಳೆವೆ
ರಂಜಿಪ ಕುಸುಮದ ಮಾಲೆ ತಂದಿಡುವೆ
ಸಂಜೆಗೆ ಪಂಜಿನ ದಾಸನಾಗಿರುವೆ ||4||

ಮೀಸಲೂಳಿಗವ ನಾ ಮಾಡಿಕೊಂಡಿರುವೆ
ಶೇಷ ಪ್ರಸಾದವ ಉಂಡುಕೊಂಡಿರುವೆ
ಶೇಷಗಿರಿ ಕಾಗಿನೆಲೆಯಾದಿಕೇಶವನ
ದಾಸರ ದಾಸರ ದಾಸರ ಮನೆಯ ||5||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.