← ಶ್ರೀಕೃಷ್ಣ

ಬೊಂಬೆಯಾಟವನಾಡಿಸಿದೆ ಮಹಾಭಾರತದ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಮುಖಾರಿ
🥁 ತಾಳ: ಝಂಪೆತಾಳ
ಬೊಂಬೆಯಾಟವನಾಡಿಸಿದೆ ಮಹಾಭಾರತದ ||ಪ||
ಅಂಬುಜಭವಾದಿ ಅಮರರು ನೋಡುತಿರಲು ||ಅ||

ಕುರುಭೂಮಿಯೆಂಬ ಪುರವೀಧಿಯನು ರಚಿಸಿ
ಮರೆಯ ಮಾಯದ ಐದು ತೆರೆಯ ಹಾಕಿ
ಧರಣೀಶರೆಂಬ ನರಪ್ರತಿಮೆಗಳನಳವಡಿಸಿ
ನರನ ರಥವಾಜಿಯ ಸೂತ್ರವನು ಪಿಡಿದು ||1||

ಓದುವನು ನಾರದನು ವಾದ್ಯಕಾರನೆ ಶಂಭು
ಬಾದರಾಯಣದೇವ ಕಥಾಪ್ರಸಂಗಿ
ಮೇದಿನಿಯ ಹೊರೆಗಳೆವ ಮೃತ್ಯುವಿನ ಹಾಸ್ಯರಸ
ವೇದನಿಕರಗಳು ಕೈವಾರಿಸುತಿರಲು ||2||

ಹದಿನೆಂಟು ಅಕ್ಷೋಹಿಣಿ ಮಾರ್ಬಲವ ನೆರೆಸಿ
ಹದಿನೆಂಟು ದಿನ ಕದನಕೇಳಿಕೆ ನಡೆಸಿ
ಅದರೊಳ್ಳೆಯವರನುಳುಹಿ ಅವನಿಭಾರವನಿಳುಹಿ
ಮುದದಿ ಬ್ರಹ್ಮಕಪಾಲವನು ತೃಪ್ತಿಗೊಳಿಸಿ ||3||

ಲೋಕದೊಳಗೈದನೆಯ ವೇದವಿದೆಂದೆನಿಸಿ
ಪಾಕಶಾಸನ ಸಭೆಯನು ಮೆಚ್ಚಿಸಿ
ಈ ಕಥೆಯ ಕೇಳಿದ ಜನಮೇಜಯನ ಪತಿಕರಿಸಿ
ತಾ ಕಪಟನಾಟಕದ ಸೂತ್ರಧಾರನೆನಿಸಿ ||4||

ಇಂತೆಸೆವ ಲೀಲಾವಿನೋದ ರಚನೆಗಳಿಂದ ಲೋ
ಕಾಂತರಂಗಳ ಸಂಚರಿಸುತ
ಸಂತಸದಿ ಭರತ ಸಂಸಾರವನು ಪೊರೆವ ವೇ
ದಾಂತನುತ ಕಾಗಿನೆಲೆಯಾದಿಕೇಶವರಾಯ ||5||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.