← ಶ್ರೀಕೃಷ್ಣ

ಭಜಿಸಿ ಬದುಕೆಲೊ ಮಾನವ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಕಾಂಬೋಧಿ
🥁 ತಾಳ: ಝಂಪೆತಾಳ
ಭಜಿಸಿ ಬದುಕೆಲೊ ಮಾನವ ||ಪ||
ಅಜಭವೇಂದ್ರಾದಿಗಳು ವಂದಿಸುವ ಪಾದವನು ||ಅ||

ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ
ಕಾಕುಶಕಟನ ಒದ್ದು ಕೊಂದ ಪಾದ
ನಾಕಭೀಕರ ಬಕನ ಮೆಟ್ಟಿ ಸೀಳಿದ ಪಾದ
ಲೋಕಪಾವನ ಗಂಗೆ ಪುಟ್ಟಿದ ಪಾದವನು ||1||

ಶಿಲೆಯ ಸತಿಯಳ ಬಂಧವಿಮುಕ್ತಿಗೊಳಿಸಿದ ಪಾದ
ಒಲಿದು ಪಾರ್ಥನ ರಥವನೊತ್ತಿದ ಪಾದ
ಕಲಿ ಸುಯೋಧನನ ಓಲಗದಿ ಕೆಡಹಿದ ಪಾದ
ಕಲಕಿ ಕಾಳಿಂಗನ ಪೆಡೆ ತುಳಿದ ಪಾದವನು ||2||

ಗರುಡ ಶೇಷಾದಿಗಳು ಬಿಡದೆ ಪೊತ್ತಿಹ ಪಾದ
ಧರೆಯನೀರಡಿ ಮಾಡಿ ಅಳೆದ ಪಾದ
ಸಿರಿ ತನ್ನ ತೊಡೆಯಮೇಲಿರಿಸಿ ಒತ್ತುವ ಪಾದ
ವರ ಕಾಗಿನೆಲೆಯಾದಿಕೇಶವನ ಪಾದವನು ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.