← ಶ್ರೀಕೃಷ್ಣ

ಮರೆಯದಿರು ಹರಿಯ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಭೈರವೀ
🥁 ತಾಳ: ಆದಿತಾಳ
ಮರೆಯದಿರು ಹರಿಯ
ಮರೆವರೆ ಮೂರು ಲೋಕದ ಧೊರಿಯ ||ಪ||

ಮದಗಜ ಹರಿಯೆಂದು ಕರೆಯಲು
ಒದಗಿ ಆಕ್ಷಣ ಬಂದು
ಮುದದಿ ನಕ್ರನ ಕೊಂದು ಸಲ
ಹಿದ ಸದ್ಭಕ್ತರ ಬಂಧು
ಹದುಳ ಪ್ರಹ್ಲಾದನ ಹೆದರಿಸಿದಸುರನ
ಉದರವ ಬಗೆದಂಥದುಭುತ ಮಹಿಮನ ||1||

ನಾರಿಯು ತನ್ನ ಕರೆದ ಮಾತ್ರದಿ
ಸೀರೆಯ ಮಳೆಗರೆದ
ಕ್ರೂರ ಖಳನ ತರಿದು ಆ ಪಾಂಡವರ
ಆರಣ್ಯದಿ ಪೊರೆದ
ಗಾರಾದಜಮಿಳ ನಾರಗ ಎನಲು
ಪಾರಗಾಣಿಸಿದಪಾರ ಗುಣನಿಧಿಯ ||2||

ಒಂದು ಬಾರಿ ಶ್ರೀಶಾ ಎಂದರೆ
ಬಂದ ದುರಿತ ನಾಶಾ
ಬೆಂದವು ಭವ ಪಾಶಾ- ಅವ
ಗೆಂದೆಂದಿಗಿಲ್ಲ ಕ್ಲೇಶಾ
ತಂದೆ ಕದರುಂಡಲಗಿ ಹನುಮಯ್ಯನೊಡೆಯ
ಚಂದಾದಿಕೇಶವನ ನೆನೆದವರೆಂದಿಗು ಧನ್ಯರು ||3|
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.