← ಶ್ರೀಕೃಷ್ಣ

ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನು

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಸೌರಾಷ್ಟ್ರ
🥁 ತಾಳ: ಛಾಪುತಾಳ
ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನು
ಮತ್ತೊಂದು ಚೋದ್ಯ ಕೇಳಿ
ಚಿತ್ರ ಹೂವಿನ ಹವಳ ಕಾಯಾಗುವ
ಅರ್ಥವ ತಿಳಿದು ಹೇಳಿ ||1||

ಸುಟ್ಟ ಬೀಜವ ಬಿತ್ತಿ ಬೆಳೆಯ ಬಾರದ ಕಾಯಿ
ಬೆಟ್ಟದಿ ಸಾರವನು
ತೊಟ್ಟು ಇಲ್ಲದ ಹಣ್ಣ ಮುಟ್ಟಿ ಕೊಯ್ವನು ಒಬ್ಬ
ಹುಟ್ಟು ಬಂಜೆಯ ಮಗನು ||2||

ಒಣಗಿದ್ದ ಮರನೇರಿ ಹಣ್ಣು ಕಾಯನು ಮಗನು
ದಣಿಯದೆ ಮೆದ್ದಿಳಿದ
ರಣದಲ್ಲಿ ತಲೆ ಹೊಯ್ದ ರುಂಡವು ಬೀಳಲು
ಹೆಣನೆದ್ದು ಕುಣಿದಾಡಿತು ||3||

ಕಣ್ಣಿಲ್ಲದಾತನು ಕಂಡು ಪಿಡಿದ ಮೃಗ
ಕೈಯಿಲ್ಲದಾತನೆಚ್ಚ
ಮಣ್ಣಲಿ ಹೊರಳುವ ಕಾಲಿಲ್ಲದಾತನು
ಗಣ್ಯವಿಲ್ಲದೆ ಪಿಡಿದ ||4||

ಎಲ್ಲರು ಕೇಳಿ ಕನಕ ಹೇಳಿದ ಮಾತ
ಎಲ್ಲರೂ ಗ್ರಹಿಸಿಕೊಳ್ಳಿ
ಬೆಳ್ಳಿ ಕಣ್ಣಿನವಗೆ ತಿಳಿಯಲಾರದ ಮಾತು
ಬಲ್ಲಾದಿಕೇಶವನು ||5||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.