← ಶ್ರೀನರಸಿಂಹ

ಯಾದವಗಿರಿವಾಸನಹುದೋ

📂 ಶ್ರೀನರಸಿಂಹ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಸಾವೇರೀ
🥁 ತಾಳ: ಆಟತಾಳ
ಯಾದವಗಿರಿವಾಸನಹುದೊ ಶ್ರೀ ನಾರಸಿಂಹ
ಆದಿನಾರಾಯಣ ಅಚ್ಯುತನಹುದೊ ||ಪ||

ಖಳ ಸೋಮಕನ ಕೊಂದು ನೀರ ಮುಳುಗಿ ಬಂದೆ
ಇಳೆಯೊಳು ಸುರಾಸುರರೈತಂದು ಬೆರೆಯಲು
ಘಳಿಲನೆ ದೇವಜನರು ಬಂದು ನಿಲ್ಲಲು
ವ್ಯಾಳೇಶನ ಸುತ್ತಿ ಸೆಳೆವ ವೇಳೆಯಲ್ಲಿ
ಇಳಿದು ಪಾತಾಳಕ್ಕೆ ಪರುವತ ಪೋಪುದ ಕಂಡು
ನಳಿನನಾಭನೆ ನಿಮ್ಮ ನೆನೆಯಲಾ ಧ್ವನಿ ಕೇಳಿ
ತಿಳಿದು ಕೂರ್ಮರೂಪಾಗಿ ಮಂದರವನು ಪೊತ್ತು
ಉಳಿಸಿದೆ ಲೋಕವನುನ್ನತ ಪರಾಕ್ರಮಿ
ಖಳ ಹಿರಣ್ಯಕ ಬಂದು ಎದುರಾರು ತನಗೆಂದು
ಇಳೆಯ ಕದ್ದೊಯ್ದು ಪೋಗುತಿರೆ ಸುರರದ ಕಂಡು
ಘಳಲನೆ ನಿಮ್ಮನು ಕೂಗಲಾ ಮೊರೆ ಕೇಳಿ
ತಿಳಿದು ಶಾಂತ ಮೂರುತಿ ಆಗಿ ಪಾವಕ ಮೂರ್ತಿ
ಕಳ್ಳ ದೈತ್ಯರ ಸಂಹಾರವ ಮಾಡಿದೆ
ನಳಿನೋದ್ಭವನಯ್ಯ ಅಮರ ಚೆನ್ನಿಗರಾಯ ||1||

ಮಠದೊಳಗೆ ಪ್ರಹ್ಲಾದ ಹರನ ನಾಮ ಸ್ಮರಿಸದೆ
ದಿಟದಿ ಹರಿಯ ನಾಮಾವಳಿಯ ನುತಿಪುದ ಕಂಡು
ಕುಟಿಲ ದಾನವ ನಿಟಲನೇತ್ರನ ಸ್ಮರಿಸೆನಲು
ಕಠಿಣ ನಿಲುವನು ಬಿಡದ ತರಳ ನಿನ್ನಯ ಗುಣವ
ಪಠಿಸಲ್ಕೆ ಪರಮ ಭಕ್ತನ ಕಾಯ ಬೇಕೆಂದು
ನಟಿಸಿ ಕಂಬದಿ ಮೂಡಿ ನಗುವ ಭಕ್ತನ ನೋಡಿ

ಸಟೆಯಲ್ಲ ಅಜಾಂಡಗಳೊಡೆವಂತೆ ಘರ್ಜಿಸೆ
ಕುಟಿಲ ದಾನವನೋಡುವುದ ಕಂಡು ಎಳೆತಂದು
ಚಿಟಿಚಿಟಿ ಚಿಟಿರೆನ್ನಲು ಉಗುರಲಿ ಸೀಳಿ
ಪುಟನೆಗೆದ ಪಾದದಲಿ ಬಲಿಯ ತಲೆಯನು ಮೆಟ್ಟಿ
ನಟನೆಯಾಡುವ ವಿದ್ಯೆಯನೆಲ್ಲಿ ಕಲಿತೆಯೊ ಕಪಟ
ನಾಟಕ ಸೂತ್ರಧಾರಿ ನೀನಹುದು ಕ್ಷತ್ರಿಯರ
ಚಟುಲ ಛಲದಿ ಒಗೆದು ಕರುಳ ಬಗೆದು ತುಳಿದ-
ದಟರನು ಸಂಹರಿಸಿದ ಚೆಲುವರಾಯ ||2||

ಅಂದು ಕೌಸಲ್ಯಾ ಗರ್ಭ ಚಂದ್ರಮನಾಗಿ ಬೆಳಗಿ
ಕೊಂದೆ ರಾವಣ ಕುಂಭಕರ್ಣಾದಿಗಳನೆಲ್ಲ
ಇಂದಿರೇಶನೆ ನಿನ್ನ ನಂಬಿದ ವಿಭೀಷಣನಿಗೆ
ಎಂದಿಗೂ ಪಾರವಿಲ್ಲದ ಪದವಿಯನಿತ್ತೆ
ಕಂದನಾಗಿ ಜನಿಸಿ ವಸುದೇವ ದೇವಕಿಯರಿಗೆ
ನಂದಗೋಕುಲದೊಳು ನಿಂದ ಕಂಸನ ಕೊಂದೆ
ಚಂದಿರನ ನೆರೆಪೋಲ್ವ ಉನ್ನತೋನ್ನತನಾಗಿ
ಕೊಂದು ತ್ರಿಪುರಾಸುರರ ಅವರ ಸತಿಯರ ಕೆಡೆಸಿ
ಒಂದೆ ನೆಗೆತಕೆ ನೆಗೆವ ಅಶ್ವವನೇರಿದೆ ವ
ಸುಂಧರೆಯ ಮೇಲೆ ಲೀಲೆಯಾಡುತ ಕೃತಯುಗದಿ
ನಿಂದು ಯಾದವಗಿರಿಯ ಮೇಲೆ ತ್ರೇತಾಯುಗದಿ
ಬಂದು ರಾಮನೆನಿಸಿಕೊಂಡೆ ದ್ವಾಪರ ಯುಗದಿ
ಬಂದು ಕೃಷ್ಣೆನಸಿಕೊಂಡೆ ಕಲಿಯುಗದೊಳು
ನಿಂದು ಚಲುವ ಚೆನ್ನಿಗರಾಯನಾದೆ ವರ
ನಂದಿಯ ಚಂದದಿಂ ರಕ್ಷಿಸಿದೆ ಎನ್ನ ಕಾಯೊ
ಇಂದಿರಾಪ್ರಿಯ ಬಾಡದಾದಿಕೇಶವ ರಾಯ ||3||
← ಶ್ರೀನರಸಿಂಹ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.