← ವೈರಾಗ್ಯ

ಯಾರಿಗಾರು ಬಹರು ಸಂಗಡ

📂 ವೈರಾಗ್ಯ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಪಂತುವರಾಳಿ
🥁 ತಾಳ: ಛಾಪುತಾಳ
ಯಾರಿಗಾರು ಬಹರು ಸಂಗಡ- ಮುಂದೆ
ಮೀರಿ ನಡೆದ ಸಂಚಿತ ಕರ್ಮವಂತೆ ಕಂತೆ ಮುಂಗಡ ||ಪ||

ಬರೆದ ಬರೆಹ ತೊಡೆದ ಮೇಲೆ ಕರೆದರಾಗ ಹೋಗಬೇಕು
ನೆರೆದು ಸುತ್ತಮುತ್ತ ಕುಳಿತ ಪರಮ ಬಂಧುವರ್ಗವೆಲ್ಲ
ಇರಿಸಬೇಡಿ ಸುಡುಸುಡೆಂಬರು ಸುಟ್ಟಬಳಿಕ
ಭರದಿ ಬಂದು ಮನೆಯೊಳೆಂಬರು ಪಾಪಿ ಸತ್ತ
ತರುಣಿ ಕೆಟ್ಟಳೆಂದುಕೊಂಬರು ಆತ್ಮ ||1||

ಸತಿಯು ಸುತರು ಪುತ್ರಿ ಮಿತ್ರರತಿಶಯದೊಳು ತಂದೆ ತಾಯಿ
ಅತಿ ವಿನೋದಗೈವ ಭಾವ ಜತನವೆಂಬೊ ಅತ್ತೆ ಮಾವ
ಜೊತೆಗೆ ಹುಟ್ಟಿದಣ್ಣ ತಮ್ಮ ಈ ದೇಹ ತಾನು
ಸತ್ತ ಗಳಿಗೆ ಮುಟ್ಟಲಮ್ಮರು ಬರಿದೆ ನಾವು
ವ್ಯಥೆಗೆ ಸಿಕ್ಕಿದೆವೆಂಬರು ಆತ್ಮ ||2||

ಕಟ್ಟಿದರ್ಧ ಕರೆವ ಎಮ್ಮೆ ಕೊಂಡುಕೊಂಡ ಸಾಲಕದನು
ಪೋಟು ಮಾಡಿ ಮಕ್ಕಳೊಡನೆ ಅಷ್ಟು ಹೇಳಿ ಸಾವತನಕ
ದುಷ್ಟ ಜನರು ಸುಮ್ಮನಿರುವರೆ ಕೈಯಲೊದಗಿ
ದಷ್ಟು ಧರ್ಮವನ್ನು ಮರೆವರೆ ಆದಿಕೇಶವನ್ನ
ಮುಟ್ಟಿ ಭಜಿಸಿ ಕಡೆಗೆ ಬಿಡುವರೆ ಆತ್ಮ ||3||
← ವೈರಾಗ್ಯ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.