← ಶ್ರೀರಾಮ

ಶ್ರೀರಾಮ ಎನ್ನಿರೊ ಮೂಜಗದವರೆಲ್ಲ

📂 ಶ್ರೀರಾಮ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಕೇದಾರಗೌಳ
🥁 ತಾಳ: ಆದಿತಾಳ
ಶ್ರೀರಾಮ ಎನ್ನಿರೊ ಮೂಜಗದವರೆಲ್ಲ
ಈರೇಳು ಭುವನ ತನ್ನುದರದೊಳಿಟ್ಟನ ||ಪ||

ಅನಿಮಿಷರಂದದಿ ವನವಾಸಕೆ ಹೋದವನ- ಶ್ರೀರಾಮ ಎನ್ನಿರೊ
ಮನಿಸಿಜ ನಾರಿಯ ಪಿತನ ಕೊಂದನ ಪಿತನ ಪೊತ್ತವನ- ಶ್ರೀರಾಮ ಎನ್ನಿರೊ
ಘನ ಕೋಡ ಕೊನೆಯಿಂದ ಧರಣಿಯ ತಾಳ್ದವನ- ಶ್ರೀರಾಮ ಎನ್ನಿರೊ
ದಿನಕರನಳಿವಿನಲಿ ಪಗೆಯ ಗೆದ್ದಾತನ- ಶ್ರೀರಾಮ ಎನ್ನಿರೊ ||1||

ಗಜವನೇರಿದವನ ತಂದೆಯ ತಾಯನಳೆದವನ- ಶ್ರೀರಾಮ ಎನ್ನಿರೊ
ಭುಜಬಲದಿಂದ ಭೂಪಾಲರ ಗೆದ್ದವನ - ಶ್ರೀರಾಮ ಎನ್ನಿರೊ
ನಿಜಮುನಿಗಳ ವನದಿಂದ ತನಯರ ತಂದವನ- ಶ್ರೀರಾಮ ಎನ್ನಿರೊ
ಭುಜಗಧರನ ಕೈಯ ಆಯುಧವನು ತಂದವನ- ಶ್ರೀರಾಮ ಎನ್ನಿರೊ ||2||

ಪೆಣನ ಭೋಜನ ಮಾಡಿದವರ ವಾಸವ ಹೊಕ್ಕವನ- ಶ್ರೀರಾಮ ಎನ್ನಿರೊ
ತೃಣಕೆ ಬಾಯಿತ್ತನ ಮೇಲೇರಿ ಬಪ್ಪನ- ಶ್ರೀರಾಮ ಎನ್ನಿರೊ
ಅಣುರೇಣು ತೃಣದೊಳು ಪರಿಪೂರ್ಣನಾದನ- ಶ್ರೀರಾಮ ಎನ್ನಿರೊ
ಪ್ರಣವಗೋಚರ ಕಾಗಿನೆಲೆಯಾದಿಕೇಶವನ- ಶ್ರೀರಾಮ ಎನ್ನಿರೊ ||3||
← ಶ್ರೀರಾಮ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.