← ಶ್ರೀಕೃಷ್ಣ

ಸಾಲದೆ ನಿನ್ನದೊಂದು ದಿವ್ಯನಾಮ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಭೂಪಾಲೀ
🥁 ತಾಳ: ಝಂಪೆತಾಳ
ಸಾಲದೆ ನಿನ್ನದೊಂದು ದಿವ್ಯನಾಮ - ಅ
ಕಾಲ ಮೃತ್ಯುವಿನ ಗಂಟಲಗಾಣ ಹರಿಯೆ

ರಣದೊಳಗೆ ಅಂಗಾಂಗ ಖಂಡತುಂಡಾಗಿ ಪ್ರತಿ
ರಣವನುತ್ತರಿಸಿ ಮರಣವ ತಾಳಿರೆ
ಪ್ರಣವ ಗೋಚರ ನೀನು ಗೋಚರಿಸಿ ಬಂದೆನ್ನ
ಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮ ||1||

ಕುಂತದಿಂ ತೂಂತುಗೊಂಡೆನ್ನ ಬೆನ್ನಿಂದಿಳಿವ
ಸಂತತ ನೆತ್ತರನೊರಸಿ ಬಿಸುಟೆ
ತಿಂತ್ರಿಣಿಯ ಮರದಡಿಯೆ ಹಾವು ಕಡಿದೊರಗಿರಲು
ಮಂತ್ರಿಸಿ ಮನೆಗೆ ಕಳುಹಿದೆ ಗರುಡಗಮನ ||2||

ಕ್ಷೀಣ ದೇಹವ ಬಿಡುವೆನೆಂದು ಪಾಡಂಬಟ್ಟು
ತ್ರಾಣದಲಿ ಗರಳ ತೈಲವ ಸೇವಿಸೆ
ವೇಣುನಾದದಲಿ ಹಣೆಯನೇವರಿಸಿ
ಪಂಚಪ್ರಾಣ ಪ್ರತಿಷ್ಠೆಯ ಮಾಡಿದೆ ಮಹಾತ್ಮ ||3||

ತಮ್ಮ ಹವಣನರಿಯದೆ ಕೊಬ್ಬಿದ ಪಿಶಾಚಿಗಳು
ಎಮ್ಮ ಮನೆಗೊಂದೆ ಸಮ ಕಲ್ಲಲಿಟ್ಟು
ಹೆಮ್ಮಕ್ಕಳ ಬಾಧಿಸುವುದನು ಕಂಡು
ಬೊಮ್ಮಜಟ್ಟಿಗರ ಶಿರವರಿದೆ ನರಹರಿಯೆ ||4||

ಓದಿ ಹೇಳಿದರೊಂದು ಕಥೆಯಾಗುತಿದೆ ಮಹಾಂ
ಬೋಧಿಶಯನನೆ ವೇದಶಾಸ್ತ್ರ ಮುಖದಿ
ಬಾಧಿಸುವ ದುರಿತಾಗ್ನಿಗಂಬು
ಶ್ರೀ ಕಾಗಿನೆಲೆಯಾದಿಕೇಶವನ ನಾಮ ಸಂಕೀರ್ತನ ||5||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.