← ವೈರಾಗ್ಯ

ಹೇಗಿದ್ದು ಹೇಗಾದೆಯೊ ಆತ್ಮ

📂 ವೈರಾಗ್ಯ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಮುಖಾರಿ
🥁 ತಾಳ: ಝಂಪೆತಾಳ
ಹೇಗಿದ್ದು ಹೇಗಾದೆಯೊ ಆತ್ಮ
ಯೋಗೀಶನಾನಂದಪುರದಲಿರುವುದ ಬಿಟ್ಟು ||ಪ||

ಬಸಿರ ಹಳ್ಳಿಗೆ ಬಂದು ಮಾಸನೂರಲಿ ನಿಂದು
ಕುಸುಕಾಡಿ ನುಡಿದು ನೆಲಬಟ್ಟೆವಿಡಿದು
ಕಿಸುಕದರಿವೆಯ ಪೊದ್ದು ಮಲಮೂತ್ರದಲಿ ಬಿದ್ದು
ವಸುಧೆಯಲಿ ದಿನಗಳೆದೆಯಲ್ಲ ಆತ್ಮ ||1||

ಎಳೆಗೆರೆಯಲಿ ಆಡಿ ಯೌವನದೂರಿಗೆ ಬಂದು
ಥಳಥಳಿಪ ಅಸ್ತಾದ್ರಿ ನೆಳಲ ಸೇರಿ
ಅಳಲು ಸುತ ಬೆಳೆದು ದಾರಿದ್ಯ್ರ ಪೇಟೆಗೆ ಬಂದು
ಹಳೆಯ ಬೀಡಿಗೆ ಪಯಣವೇ ಆತ್ಮ ||2||

ಗನ್ನಗತಕದ ಮಾತು ಇನ್ನು ನಿನಗೇತಕೋ
ಮುನ್ನ ಮಾಡಿದ ಕರ್ಮಭರದೊಡಲಿದೆ
ಉನ್ನತದ ಕಾಗಿನೆಲೆಯಾದಿಕೇಶವ ಸುಪ್ರ
ಸನ್ನ ಮೂರುತಿಯ ಭಜಿಸೆಲೊ ಆತ್ಮ ||3||
← ವೈರಾಗ್ಯ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.