← ಶ್ರೀಕೃಷ್ಣ

ಅಧಮನಲ್ಲವೆ ಅವನು ಅಧಮನಲ್ಲವೆ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಅಧಮನಲ್ಲವೆ ಅವನು ಅಧಮನಲ್ಲವೆ |
ಯದುಪತಿಯ ಭಜಿಸಿ ಸದಾ | ಬದುಕದಿದ್ದ ನರಜನ್ಮ ಪ
ಹೊರಳಿ ಎದ್ದು ಕುಳಿತು ಎರಡು ಕರವ ಮುಗಿದು ಜಿಹ್ವೆಯಲ್ಲಿ |
ಹರಿ ಹರಿ ಎಂದು ಸ್ಮರಣೆ ಮಾಡಿ | ಹರುಷವಾಗದಿದ್ದ ನರನು ||1||

ಮಡುವಿನೊಳಗೆ ಮಿಂದು ಬಂದು |
ಕುಡತಿ ಜಲವ ಕೊಂಡು ರವಿಗೆ |
ಕಡಿಯದಘ್ರ್ಯವೆರೆದು ಪುಣ್ಯ | ಪಡೆಯದಿದ್ದ ಹೀನ ನರನು ||2||

ಹಾದಿ ಹಿಡಿತು ಬರುತ ಸುಮ್ಮನಾದರನ್ನ | ಇರದೆ ವೇಣು |
ನಾದ ಕೃಷ್ಣ ಕೃಷ್ಣಯೆಂದೂ | ಓದಿಕೊಳುತ ಬಾರದವನು ||3||

ಕಲಶ ತುಂಬಿದ ನೀರು ತಂದು ಕುಳಿತು ಘಳಿಗೆ |
ಸಾಲಿಗ್ರಾಮ ತೊಳೆದು ತೀರ್ಥವೆಂದು ಮಾಡಿ |
ಕೊಳದ ಯಿದ್ದ ಹೀನ ನರನು ||4||

ಗಿಡದ ತೊಪ್ಪಲು ತೊಡಿಮೆ ತಂದು |
ಪೊಡವಿಯರಸ ಕೇಶವನ್ನ |
ಅಡಿಗೆ ಏರಿಸಿ ನಗುತ ತನ್ನ | ಮುಡಿಯಲಿಟ್ಟುಕೊಳದ ನರನು ||5||

ಅಟ್ಟ ಅಡಿಗೆ ಎಲ್ಲ ಸಿರಿ | ವಿಠ್ಠಲನ ಮುಂದೆ ತಂದು |
ಇಟ್ಟು ಅರ್ಪಿತವೆಂದು ಸುಖ | ಬಟ್ಟು ಉಣದ ಮಂಕು ನರನು||6||

ಉಂಡು ತಿಂದು ತೇಗಿಕೊಳುತ | ತಂಡ ತಂಡದ ವಿಷಯದಲ್ಲಿ |
ಭಂಡನಾಗಿ ನಮ್ಮ ಕೃಷ್ಣ ಭಂಡನೆಂದೂ ಅನದ ನರನು ||7||

ಊರು ಕೇರಿಗೆ ಪೋಗುವಾಗ | ಭಾರಪೊತ್ತು ತಿರುಗುವಾಗ |
ಸಾರಿಸಾರಿಗೆ ತಿಳಿದು ಕಂಸಾರಿ ಎನದ ಹೀನ ನರನು ||8||

ಮಂತ್ರವಿಲ್ಲ ತಂತ್ರವಿಲ್ಲ | ಕಂತುಪಿತನ ಮುಂದೆ ನಿಂತು |
ಸಂತರ್ಪಣೆ ಎಂದು ಮನದಿ | ಚಿಂತೆ ಮಾಡದಿದ್ದ ನರನು ||9||

ಮಲಗಿ ನಿದ್ರೆಗೊಳುತರೊಮ್ಮೆ | ಕಳವಳಿಸಿ ಭೀತಿಯಲಿ |
ತಳಮಳವಗೊಂಡು ಹರಿಯ | ಜಲಜಪಾದ ನೆನೆಯದವನು ||10||

ಎಲ್ಲ ಬಿಟ್ಟು ವಿಜಯವಿಠ್ಠಲ ವೆಂಕಟನೆ ದೈವ |
ಅಲ್ಲದಿಲ್ಲ್ಲವೆಂದು ಬಂದು ಸೊಲ್ಲು ಪೇಳಿ ಬಾಳದವನು ||11||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.