← ಶ್ರೀದೇವಿ

ಕೃಷ್ಣವೇಣಿ ಕಲ್ಯಾಣಿ

📂 ಶ್ರೀದೇವಿ
✍️ ವಿಜಯದಾಸ
🏷️ ಕೀರ್ತನೆಗಳು
ಕೃಷ್ಣವೇಣಿ ಕಲ್ಯಾಣಿ
ಕಷ್ಟ ಪರಿಹರಿಪೆ ನಿತ್ಯ ಸಾಗರನ ರಾಣಿ

ಅಜನ ನಿರೂಪದಲಿ ಜಾಬಾಲಿಮುನಿ ಬಂದು
ಭಜಿಸಿದನು ನಿನ್ನ ಬಲುದಿವಸಂಗಳು
ನಿಜವಾಗಿ ಹರನ ಜಡೆಯಲ್ಲಿ ಉದ್ಭವಿಸಿದೆ
ತ್ರಿಜಗದೊಳಗೆ ಮೆರೆದೆ ತ್ರಿದಶಾಮರವಂದಿತೆ ||1||

ಕನ್ಯಾರಾಶಿಗೆ ಜೀವ ಬಂದು ಪ್ರಾಪುತನಾಗೆ
ಹನ್ನೆರಡು ವರುಷಕೆ ಒಮ್ಮೆ ಬಿಡದೇ
ಮನ್ನಿಸಿ ಭಕುತಿಯಿಂದ ಒಂದು ಮಜ್ಜನಮಾಡೆ
ಧನ್ಯನ ಮಾಳ್ಪೆ ಬಲು ಘನ್ನ ತರಂಗಿಣಿ ||2||

ಎತ್ತ ನೋಡಿದರತ್ತ ನಾಲ್ಕುವರೆ ಯೋಜನವು
ಕ್ಷೇತ್ರ ಪುಣ್ಯದೇವಿಯೆನಿಸಿಕೊಂಬೆ
ಸ್ತುತಿಸಲಳವೇ ನಿನ್ನ ಮಹಿಮೆಯ ಅನುಗಾಲ
ಮತ್ತಗಜಗಮನೆ ಮಲದೂರೆ ಮುಕ್ತಿಧಾರೆ ||3||

ಪೋಗದ ಪಾಪಗಳಿರಲು ನಿನ್ನ ದರುಶನವು
ಆಗುತ್ತ ಓಡಿದವು ನೆಲೆಗಾಣದೆ
ಬಾಗಿ ನಮೋ ನಮೋಯೆಂಬ ಭಾಗವತರ ಮನೆಯ
ಬಾಗಿಲ ಕಾಯ್ವ ಭಾಗ್ಯವ ಕೊಡು ಕರುಣದಲಿ ||4||

ಕಲಿಯುಗಕೆ ನೀನೇ ವೆಗ್ಗಳವೆಂದು ಬುಧಜನರು
ಒಲಿದು ಕೊಂಡಾಡುವರು ಸತತದಲ್ಲಿ
ಜಲನಿಧಿಯ ಎರಡು ಮೊಗದಲಿ ಮೆರೆದೆ
ಮಹತಟಿನಿನೆಲೆಗೊಳಿಸು ವಿಜಯವಿಠ್ಠಲ ಚರಣದಲ್ಲಿ ||5||
← ಶ್ರೀದೇವಿ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.